ಮುಧೋಳ 
ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ ಪಟ್ಟಣ. ಬಿಜಾಪುರ ಜಿಲ್ಲೆಯ ನೈಋತ್ಯ ಭಾಗದಲ್ಲಿರುವ ಈ ತಾಲ್ಲೂಕನ್ನು ಉತ್ತರದಲ್ಲಿ ಜಮಖಂಡಿ, ಪೂರ್ವದಲ್ಲಿ ಬೀಳಗಿ ಮತ್ತು ಬಾಗಲಕೋಟೆ, ಆಗ್ನೇಯದಲ್ಲಿ ಬಾದಾಮಿ ತಾಲ್ಲೂಕುಗಳೂ ವಾಯವ್ಯ ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಬೆಳಗಾಂವಿ ಜಿಲ್ಲೆಯೂ ಸುತ್ತುವರಿದಿವೆ, ತಾಲ್ಲೂಕು ಜಮಖಂಡಿ ಪೂರ್ವಭಾಗಕ್ಕೆ ಸೇರಿದೆ. ಲೋಕಾಪುರ ಮತ್ತು ಮುಧೋಳ ಇಲ್ಲಿಯ ಹೋಬಳಿಗಳು. 77 ಗ್ರಾಮಗಳಿವೆ. ತಾಲ್ಲೂಕಿನ ವಿಸ್ತೀರ್ಣ 955.41 ಚ.ಕಿಮೀ. ಜನಸಂಖ್ಯೆ 1,64,389(1981).

	ಬೆಳಗಾಂವಿ ಜಿಲ್ಲೆಯಿಂದ ಹರಿದು ಬರುವ ಘಟಪ್ರಭಾ ಮುಧೋಳ ಪಟ್ಟಣಕ್ಕೆ ಪಶ್ಚಿಮದಲ್ಲಿ ಸುಮಾರು 13 ಕಿಮೀ ದೂರದಲ್ಲಿ ಈ ತಾಲ್ಲೂಕನ್ನು ಪ್ರವೇಶಿಸಿ ಅಡ್ಡಕ್ಕೆ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿದು ಬಾಗಲಕೋಟೆ ತಾಲ್ಲೂಕನ್ನು ಪ್ರವೇಶಿಸುತ್ತದೆ. ಮುಧೋಳ ತಾಲ್ಲೂಕಿನಲ್ಲಿ ಉತ್ತಮ ಸುಣ್ಣಕಲ್ಲು ಸಿಗುವುದಲ್ಲದೆ ಲೋಕಾಪುರ ಮತ್ತು ನದಿ ದಂಡೆಗುಂಟ ಮೆಕ್ಕಲುಮಣ್ಣನ್ನೂ ಮೆದುಕಾವಿ ಬಣ್ಣದ ಜೇಡಿಮಣ್ಣನ್ನೂ ಕಾಣಬಹುದು. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 462.39 ಮಿಮೀ. ಘಟಪ್ರಭಾ ನದಿ ಎಡದಂಡೆ ಯೋಜನೆಯಿಂದ ಈ ತಾಲ್ಲೂಕಿನ ಹೆಚ್ಚು ಭೂಮಿಗೆ ಜಲಸಮೃದ್ಧಿ ಒದಗಿಬಂದಿದೆ. ಇಲ್ಲಿಯ ಮುಖ್ಯ ಬೆಳೆ ಜೋಳ, ಗೋಧಿ, ಸೇಂಗಾ ಮತ್ತು ದ್ವಿದಳಧಾನ್ಯಗಳು, ಪಶುಪಾಲನೆ ವ್ಯವಸಾಯದ ಒಂದು ಅಂಗವಾಗಿ ಬೆಳೆದುಬಂದಿದೆ. ಅವುಗಳ ರಕ್ಷಣೆಗೆ ಪಶುವೈದ್ಯಾಲಯಗಳಿವೆ.

	ಸುಣ್ಣ ತಯಾರಿಕೆ, ಉಣ್ಣೆ ಉತ್ಪಾದನೆ ಇಲ್ಲಿನ ಕೈಗಾರಿಕೆಗಳು ವ್ಯಾಪಾರ ವಾಣಿಜ್ಯಕ್ಕೆ ಪೂರಕವಾಗಿ ಬ್ಯಾಂಕುಗಳಿವೆ. ಆರೋಗ್ಯಕೇಂದ್ರಗಳಿವೆ. ವೈದ್ಯಕೀಯ ಸೌಲಭ್ಯ ಮತ್ತು ವಿದ್ಯುತ್, ಅಂಚೆ, ತಂತಿ ಮುಂತಾದ ನಾಗರಿಕ ಸೌಕರ್ಯಗಳು ಇವೆ. ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ.

	ಮುಧೋಳ ತಾಲ್ಲೂಕಿನ ಬೆಳಗಲಿ ಗ್ರಾಮ ಮುಧೋಳದ ಪಶ್ಚಿಮದಲ್ಲಿ 11ಕಿಮೀ ದೂರದಲ್ಲಿದೆ. ಇದೇ ರನ್ನನ ಜನ್ಮಸ್ಥಳ ಎಂದು ಕೆಲವರು ಹೇಳುವರು. ಚಿತ್ರ ಭಾನುಕೋಟ ಘಟಪ್ರಭಾ ನದಿದಂಡೆಯಲ್ಲಿರುವ ಚಿಕ್ಕ ಗ್ರಾಮ. ಮುಧೋಳಕ್ಕೆ ಆಗ್ನೇಯದಲ್ಲಿ 22 ಕಿಮೀ ದೂರದಲ್ಲಿದೆ. ಇಲ್ಲಿ ಲೋಕಾಪುರದ ಜ್ಞಾನೇಶ್ವರಿ ಸ್ವಾಮಿಗಳು ತಪಸ್ಸು ಮಾಡಿದ ಪುರಾತನಗವಿ ಇದೆ. ಮುಧೋಳಕ್ಕೆ ವಾಯವ್ಯದಲ್ಲಿ 19 ಕಿಮೀ ದೂರದಲ್ಲಿರುವ ಮಹಾಲಿಂಗಪುರ ಒಂದು ವ್ಯಾಪಾರ ಮತ್ತು ಧಾರ್ಮಿಕಕೇಂದ್ರ.

	ಮುಧೋಳ ಈ ತಾಲ್ಲೂಕು ಮತ್ತು ಹೋಬಳಿಯ ಕೇಂದ್ರ. ಬಿಜಾಪುರಕ್ಕೆ ನೈಋತ್ಯದಲ್ಲಿ ಜಮಖಂಡಿಯ ದಕ್ಷಿಣಕ್ಕೆ 19ಕಿಮೀ ದೂರದಲ್ಲಿ ಘಟಪ್ರಭಾ ನದಿ ಎಡದಂಡೆಯ ಮೇಲಿದೆ. ಪಟ್ಟಣ ಇಂದು ವ್ಯಾಪಾರಕೇಂದ್ರವಾಗಿ ವಿಸ್ತರಿಸುತ್ತಿದೆ. ಜನಸಂಖ್ಯೆ 21.356 (1985).

	ಹಿಂದಿನ ಸುಂದರ ಪಟ್ಟಣ 'ಮದುವಳಲ್ ಇಂದಿನ ಮುಧೋಳವಾಗಿದೆ ಎಂದು ಹೇಳುವರು. ರನ್ನಮಹಾಕವಿಯ ಜನ್ಮಸ್ಥಳವಾಗಿದ್ದು ಆತನದೆಂದು ಹೇಳುವ ಒಂದು ಹಳೆಯ ಮನೆಯನ್ನು ಈಗಲೂ ತೋರಿಸುವರು. ಇಲ್ಲಿ ಒಂದು ಕಲ್ಲಿನ ಮೂರ್ತಿ ಇದ್ದು ಅದು ಕವಿಯದೆಂದು ಹೇಳುವುದಿದೆ.

	ಮುಧೋಳ ಹಿಂದೆ ಸಂಸ್ಥಾನಿಕ ಪ್ರದೇಶವಾಗಿದ್ದು ಆ ಸಂಸ್ಥಾನಿಕರ ಹಳೆಯ ವಾಡೆ ಇದೆ. ಊರಿನ ಉತ್ತರಭಾಗದಲ್ಲಿ ಮುಸ್ಲಿಮ್ ಸಂತನೊಬ್ಬನ ದರ್ಗಾ ಇದೆ. ಮುಧೋಳದಲ್ಲಿ ಪೌರಸಭಾಡಳಿತವಿದೆ.
(ಆರ್.ಎಂ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ